ಫ್ಲೆಮಿಂಗ್, ಜಾನ್ ಅಂಬ್ರೋಸ್
	1849-1945, ಇಂಗ್ಲೆಂಡಿನ ವೈದ್ಯುತ ಎಂಜಿನಿಯರ್, 1849 ನವಂಬರ್ 29ರಂದು ಜನನ. 1945 ಏಪ್ರಿಲ್ 19ರಂದು ಮರಣ. ಲಂಡನ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ವೈದ್ಯುತ ಎಂಜಿನಿಯರಿಂಗ್ ಪ್ರಾಧ್ಯಾಪಕನಾಗಿದ್ದು ಫ್ಲೆಮಿಂಗ್ ಭೌತವಿಜ್ಞಾನದಲ್ಲಿ ಕೆಲವು ಮುಖ್ಯ ಮೂಲತತ್ತ್ವಗಳನ್ನು ಆವಿಷ್ಕರಿಸಿದ್ದಾನೆ: ಡಯೋಡ್ ಎಂಬ ಎಲೆಕ್ಟ್ರಾನ್ ಕವಾಟವನ್ನು ಪ್ರಥಮವಾಗಿ ರಚಿಸಿ ಅದನ್ನು ಪ್ರಯೋಗಿಕವಾಗಿ ದಿಷ್ಟಕಾರಿಯಾಗಿ (ರೆಕ್ಟಿಫೈಯರ್) ಉಪಯೋಗಿಸಬಹುದೆಂದು ತೋರಿಸಿದ (1904). ಈತ ಕಾಂತಕ್ಷೇತ್ರದಲ್ಲಿರುವ ವಿದ್ಯುದ್ವಾಹಕ ತಂತಿಯಲ್ಲಿ ವಿದ್ಯುತ್ತನ್ನು ಹಾಯಿಸಿದಾಗ ತಂತಿಯ ಮೇಲೆ ಬಲಪ್ರೇರಿತವಾಗುತ್ತದೆ. ಇದರ ದಿಶೆಯನ್ನು ಗೊತ್ತು ಮಾಡುವ ನಿಯಮವನ್ನು ಪತ್ತೆ ಹಚ್ಚಿದ. ಇದಕ್ಕೆ ಫ್ಲೆಮಿಂಗನ ಎಡಗೈನಿಯಮ ಎಂದು ಹೆಸರು. ಎಡಗೈಯ ಹೆಬ್ಬೆಟ್ಟು, ತೋರುಬೆರಳು ಮತ್ತು ನಡುಬೆರಳು ಇವು ಮೂರನ್ನೂ ಒಂದಕ್ಕೊಂದು ಪರಸ್ಪರ ಲಂಬವಾಗಿರುವಂತೆ ಹಿಡಿದುಕೊಂಡಾಗ, ತೋರುಬೆರಳು ಕಾಂತಕ್ಷೇತ್ರದ ದಿಶೆಯನ್ನೂ ನಡುಬೆರಳು ಪ್ರವಾಹದ ದಿಶೆಯನ್ನೂ ಸೂಚಿಸುವುದಾದರೆ ಹೆಬ್ಬೆರಳು ಪ್ರಯೋಗವಾದ ಬಲದ ದಿಶೆಯನ್ನು ಸೂಚಿಸುತ್ತದೆ.

	ವಿದ್ಯುದ್ವಾಹಕ ತಂತಿ ಮತ್ತು ಅದನ್ನು ಆವರಿಸಿರುವ ಕಾಂತಕ್ಷೇತ್ರ ಇವುಗಳ ನಡುವೆ ಸಾಪೇಕ್ಷ ಚಲನೆ ಉಂಟಾದಾಗ ತಂತಿಯಲ್ಲಿ ಪ್ರವಾಹ ಪ್ರೇರಿತವಾಗುತ್ತದೆ. ಇದರ ದಿಶೆಯನ್ನು ತಿಳಿಸುವ ನಿಯಮಕ್ಕೆ ಫ್ಲೆಮಿಂಗನ ಬಲಗೈನಿಯಮ ಎಂದು ಹೆಸರು. ಬಲಗೈಯ ಮೊದಲಿನ ಮೂರುಬೆರಳುಗಳನ್ನು ಒಂದಕ್ಕೊಂದು ಪರಸ್ಪರ ಲಂಬವಾಗಿರುವಂತೆ ಹಿಡಿದುಕೊಂಡಾಗ, ತೋರುಬೆರಳು ಕಾಂತಕ್ಷೇತ್ರದ ದಿಶೆಯನ್ನು ಹೆಬ್ಬೆರಳು ಚಲನೆಯ ದಿಕ್ಕನ್ನೂ ಸೂಚಿಸುವುದಾದರೆ ನಡುಬೆರಳು ಪ್ರೇರಿತ ಪ್ರವಾಹದ ದಿಶೆಯನ್ನು ಸೂಚಿಸುತ್ತದೆ.

	ಪ್ರವಾಹಕ್ಕೆ ಲೋಹಗಳಲ್ಲಿ ಉಂಟಾಗುವ ರೋಧವನ್ನು ಅನೇಕ ಲೋಹಗಳಲ್ಲಿ ಹೆಚ್ಚಿನ ಉಷ್ಣತಾವ್ಯಾಪ್ತಿಯಲ್ಲಿ ಅಳೆದು ರೋಧ ಲೋಹದ ಉಷ್ಣತೆ ಹೆಚ್ಚಿದಂತೆ ಉಷ್ಣತೆಗೆ ನೇರ ಪ್ರಮಾಣದಲ್ಲಿ ಹೆಚ್ಚುತ್ತದೆ ಎಂದು ಫ್ಲೆಮಿಂಗ್ ತೋರಿಸಿದ. 1885ರಲ್ಲಿ ಫ್ಲೆಮಿಂಗ್ ವಿದ್ಯುದ್ವಾಹಕ ಬಲವನ್ನು ನಿಖರವಾಗಿ ಅಳೆಯಲು ಉಪಯೋಗಿಸುವ ವಿಭವಮಾಪಕವೊಂದನ್ನು ಪ್ರಥಮವಾಗಿ ರಚಿಸಿದ ಕೂಡ.

	ಡಯೋಡ್ ಕವಾಟವನ್ನು ಹಿಂದೆ ಕೆಲವು ಕಾಲ ಫ್ಲೆಮಿಂಗ್ ಕವಾಟ ಎಂದೇ ಕರೆಯುತ್ತಿದ್ದರು. ಇದನ್ನು ರೇಡಿಯೊ. ದೂರಲೇಖನ (ತಂತಿ), ದೂರದರ್ಶನ, ರೇಡಾರ್, ಕೈಗಾರಿಕೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ದಿಷ್ಟಕಾರಿ, ಸಂಸೂಚಕ (ಡಿಟಿಕ್ಟರ್) ಮುಂತಾದ ನಿಯಂತ್ರಣ ಕಾರ್ಯಗಳಿಗೆ ಉಪಯೋಗಿಸುತ್ತಾರೆ.

	ಡಯೋಡ್ ಕವಾಟದಲ್ಲಿ ಕ್ಯಾಥೋಡ್ ಮತ್ತು ಅ್ಯನೋಡ್ ಫಲಕಗಳ ಮಧ್ಯೆ ಗ್ರಿಡ್ ಎಂಬ ಮೂರನೆಯ ಫಲಕವನ್ನು ಉಪಯೋಗಿಸುವುದರಿಂದ ಕವಾಟದಲ್ಲಿ ಏರ್ಪಡುವ ಎಲೆಕ್ಟ್ರಾನ್ ಪ್ರವಾಹವನ್ನು ಅತಿನಿಖರವಾಗಿ ನಿಯಂತ್ರಿಸಬಹುದು. ಈ ಜೋಡಣೆಗೆ ಟ್ರಯೋಡ್ ಎಂದು ಹೆಸರು. ಇದನ್ನು ಪ್ರಥಮವಾಗಿ ಡೆಫಾರೆಸ್ಟ್ ರಚಿಸಿದ. ಇಂದು ಈ ಎಲೆಕ್ಟ್ರಾನ್ ಕವಾಟಗಳ ಉಪಯೋಗ ಹೆಚ್ಚಾಗಿದೆ. ಅಂದು ಫ್ಲೆಮಿಂಗ್ ಮತ್ತು ಡೆಫಾರಸ್ಟ್ ಮಾಡಿದ ಡಯೋಡ್ ಮತ್ತು ಟ್ರಯೋಡ್ ರಚನೆ ಈಗ ಅದ್ಭುತವಾಗಿ ಬೆಳೆದು ನಿಂತಿರುವ ಎಲೆಕ್ಟ್ರಾನಿಕ್ಸ್ ಯುಗಕ್ಕೆ ನಾಂದಿಯಾಯಿತು.
(ಎನ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ